ಮಿರ್ಟೇಸೀ ಕುಟುಂಬದ ಯೂಜೀನಿಯ ಕ್ಯಾರಿಯೊಫಿಲ್ಲೆಟಾ ಪ್ರಭೇದದ ಸಸ್ಯ. ಕ್ರಿ.ಪೂ. 3ನೆಯ ಶತಮಾನದಷ್ಟು ಹಿಂದೆ ಚೀನದೇಶದಲ್ಲಿ ಸಂಬಾರ ಪದಾರ್ಥವಾಗಿ ಉಪಯೋಗಿಸುತ್ತಿದ್ದರೆಂದೂ ತದನಂತರದ ದಿನಗಳಲ್ಲಿ ಯುರೋಪ್ ಮತ್ತು ಮಧ್ಯ ಏಷ್ಯಗಳಲ್ಲಿ ಕೂಡ ಬಳಕೆಯಲ್ಲಿತ್ತೆಂದೂ ತಿಳಿದುಬಂದಿದೆ. ಇದರ ಹುಟ್ಟೂರು ಮೊಲಾಕ್ಕ ದ್ವೀಪ.  
ಪೋರ್ಚುಗೀಸರು ಈ ದ್ವೀಪಗಳಲ್ಲಿ ಲವಂಗ ಬೆಳೆಸುತ್ತಿದ್ದರೆಂದೂ ಅವರಿಗೆ ಇದರ ವ್ಯಾಪಾರದಲ್ಲಿ ಸಾರ್ವಭೌಮತ್ವವಿದ್ದಿತೆಂದೂ ಕ್ರಮೇಣ ವ್ಯಾಪಾರಸಾರ್ವಭೌಮತ್ವ ಫ್ರೆಂಚರ ವಶವಾಯಿತೆಂದೂ ದಾಖಲೆಗಳಿಂದ ತಿಳಿಯುತ್ತದೆ. ಈಗ ಲವಂಗವನ್ನು ಭೂಮಧ್ಯರೇಖೆಯ ಆಸುಪಾಸಿನಲ್ಲಿ ಬೆಳೆಸಲಾಗುತ್ತಿದೆ. ಜಾಂಜಿಬಾರ್‍ನಲ್ಲಿ ಶೇಕಡಾ 90ರಷ್ಟು ಲವಂಗಗಳನ್ನು ಉತ್ಪಾದಿಸುತ್ತಾರೆ. ಇಂಡೊನೇಷ್ಯ, ಮಾರಿಷಸ್ ಮತ್ತು ವೆಸ್ಟ್ ಇಂಡಿಸ್‍ನಲ್ಲಿ ಸಹ ಉತ್ಪಾದನೆಯಾಗುತ್ತಿದೆ.

ಇದೊಂದು ಅಚ್ಚ ಹಸುರಿನ, ಶಂಕು ಆಕಾರದ ಸಣ್ಣ ಮರ. ಹೂವಿನ ಮೊಗ್ಗುಗಳು ಮೊದಲು ಹಸುರಾಗಿದ್ದು ಮುಂದೆ ಕೆಂಪಾಗುತ್ತವೆ. ಒಣಗಿದಾಗ ಅವು ಕಂದು ಬಣ್ಣಕ್ಕೆ ತಿರುಗುತ್ತವೆ. ಕ್ಲೊವ್ ಎಂದರೆ ಫ್ರೆಂಚ್ ಭಾಷೆಯಲ್ಲಿ ಉಂಗುರ ಎಂದರ್ಥ. ಹೂವಿನ ತೊಟ್ಟು ಕುಬ್ಜ. ಅದರ ತುದಿಯಲ್ಲಿ ದುಂಡಗಿನ ಮೊಗ್ಗು ದಳಗಳೂ ಅದರ ಸುತ್ತ ಪುಷ್ಪಪಾತ್ರೆಯ 4 ಮೊನಚು ದಳಗಳೂ ಇವೆ. ಮೊಗ್ಗುಗಳು ಕೆಂಪು ಬಣ್ಣಕ್ಕೆ ತಿರುಗಿದಾಗ ಒಂದೊಂದನ್ನೇ ಕೈಯಿಂದ ಬಿಡಿಸಿ ಕಿತ್ತು ಎಲ್ಲವನ್ನೂ ಬಿಸಿಲಿನಲ್ಲಿ ಅಥವಾ ಒಲೆಯ ಮೇಲೆ ಒಣಗಿಸಲಾಗುತ್ತದೆ. ಕೊಂಬೆಗಳನ್ನು ತುಂಡರಿಸಿದ ಭಾಗಗಳಿಂದ ಅಥವಾ ಬೀಜಗಳನ್ನು ಹುಟ್ಟು ಹಾಕಿ ಸಸ್ಯವಾಟಿಯಲ್ಲಿ ಮರಿ ಸಸ್ಯಗಳನ್ನು ವೃದ್ಧಿಮಾಡುವುದರ ಮೂಲಕ ಮರಗಳನ್ನು ಬೆಳೆಸಲಾಗುತ್ತದೆ. ಸುಮಾರು 20 ವರ್ಷದ ಮರ ಹೂಗಳನ್ನು ಬಿಡಲು ಆರಂಭಿಸುತ್ತದೆ.

ಉಪಯೋಗಗಳು: ಸಾಂಬಾರ್, ಸಾಸ್, ಔಷಧಿಗಳು ಮತ್ತು ಇತರ ಸಿಹಿ ಮತ್ತು ಖಾರದ ಆಹಾರ ಪದಾರ್ಥಗಳಿಗೆ ಪರಿಮಳಪೂಸಲು, ಬಾಯಿ ದುರ್ವಾಸನೆ ನೀಗಿಸಲು, ಹಲ್ಲು ನೋವನ್ನು ಶಮನಿಸಲು ಲವಂಗದ ಉಪಯೋಗ ಉಂಟು. ಇದರ ಎಣ್ಣೆಯನ್ನು ಜೀರ್ಣಕಾರಿಯಾಗಿಯೂ ಪ್ರಯೋಗಾಲಯಗಳಲ್ಲಿ ಅಂಗಾಂಶಗಳ ನಿರ್ಮಲಕಾರಿಯಾಗಿಯೂ ಬಳಸುತ್ತಾರೆ. ಯುಜಿನಾಲ್ ಎಂಬುದು ಲವಂಗದಿಂದ ತಯಾರಿಸಿದ ಒಂದು ರಾಸಾಯನಿಕ. ಇದನ್ನು ಬಳಸಿ ಕೃತಕವಾಗಿ ವೆನಿಲ್ಲಾ ತಯಾರಿಸುತ್ತಾರೆ.

(ಟಿ.ಎಮ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ